ಚೇಳು
ಆರ್ಯಾಕ್ನಿಡ ವರ್ಗದ ಸ್ಕಾರ್ಪಿಯಾನೀಸ್ ಗಣ ಹಾಗೂ ಸ್ಕಾರ್ಪಿಯಾನಿಡೀ ಕುಟುಂಬಕ್ಕೆ ಸೇರಿದ ಒಂದು ದೊಡ್ಡ ಸಂಧಿಪದಿ (ಸ್ಕಾರ್ಪಿಯನ್). ಇದರಲ್ಲಿ 400 ಕ್ಕೂ ಹೆಚ್ಚು ಪ್ರಭೇದಗಳಿವೆ. ಹೆಚ್ಚುಕಡಿಮೆ ಎಲ್ಲವೂ ಪ್ರಪಂಚದ ಉಷ್ಣ ಹಾಗೂ ಉಪೋಷ್ಣ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತವೆ. ಚೇಳಿನ ವಿವಿಧ ಬಗೆಗಳ ಗಾತ್ರದಲ್ಲಿ ಬಹಳ ವ್ಯತ್ಯಾಸ ಇದೆಯಾದರೂ ಎಲ್ಲಕ್ಕೂ ಸಮಾನವೆನಿಸುವ ಮತ್ತು ಇವಕ್ಕೆ ಮಾತ್ರ ವಿಶಿಷ್ಟವಾದ ಕೆಲವು ಲಕ್ಷಣಗಳಿರುವುದರಿಂದ ಚೇಳುಗಳನ್ನು ಸುಲಭವಾಗಿ ಗುರುತಿಸಬಹುದು. ದೇಹದಲ್ಲಿ ಆರು ಖಂಡಗಳಿಂದ ಕೂಡಿದ ಶಿರೋರ ಅಥವಾ ಪ್ರೋಸೋಮ ಮತ್ತು ಹನ್ನೆರಡು ಖಂಡಗಳಿಂದ ಕೂಡಿದ ಒಫಿಸ್ತೋಸೊಮ ಅಥವಾ ಉದರ ಭಾಗಗಳನ್ನು ಗುರುತಿಸಬಹುದು. ಉದರದಲ್ಲಿ ಏಳು ಖಂಡಗಳಿರುವ ಮೀಸೋಸೋಮ ಮತ್ತು ಐದು ಖಂಡಗಳುಳ್ಳ ಮೆಟಸೋಮ ಭಾಗಗಳಿವೆ. ಮೆಟಸೋಮದ ತುದಿಯಲ್ಲಿ ವಿಷಗ್ರಂಥಿಯುಳ್ಳ ಕೊಂಡಿಯಿದೆ. ಶಿರೋರವೆಂಬುದು ತಲೆ ಮತ್ತು ಎದೆಯ ಭಾಗದ ಒಕ್ಕೂಟ. ಅದರ ಮೇಲುಹೊದಿಕೆಯಾದ ಕೈಟನ್ ಫಲಕದ (ಕ್ಯಾರಪೇಸ್) ಮಧ್ಯಭಾಗದಲ್ಲಿ ಒಂದು ಜೊತೆ ಮತ್ತು ಮುಂದಿನ ತುದಿಯ ಎಡಬಲ ಪಕ್ಕದ ಅಂಚಿನಲ್ಲಿ ಮೂರು ಜೊತೆ ಸರಳ ರಚನೆಯ ಕಣ್ಣುಗಳು ಉಂಟು. ಶಿರೋರದಲ್ಲಿ ಆರು ಜೊತೆ ಉಪಾಂಗಗಳೂ ಬಾಯಿಯ ಇಕ್ಕೆಡೆಗಳಲ್ಲಿ ಒಂದು ಜೊತೆ ಕೆಲಿಸೆರಿ ಉಪಾಂಗಗಳೂ ಇವೆ. ಇವುಗಳಲ್ಲಿ ತಲಾ 3 ಖಂಡಗಳಿವೆ. ಚಿಕ್ಕದಾದ ಬುಡದ ಖಂಡವನ್ನು ಶಿರೋರದ ಫಲಕದ ಮುಂಭಾಗ ಮುಚ್ಚಿರುವುದು. ಮುಂದಿರುವ ಎರಡು ಖಂಡಗಳು ಆಹಾರವನ್ನು ಬಿಗಿಯಾಗಿ ಹಿಡಿಯಲು ಸಹಕರಿಸುತ್ತವೆ. ಶಿರೋರದ ಎರಡನೆಯ ಜೊತೆ ಉಪಾಂಗಗಳಾದ ಪೆಡಿಪಾಲ್ಪಿಗಳು ದೊಡ್ಡವು. ಇವುಗಳಲ್ಲೂ ತಲಾ 6 ಖಂಡಗಳಿವೆ. ತುದಿಯಲ್ಲಿರುವ ಎರಡು ಖಂಡಗಳು ಚಿಮುಟದ ಅಲಗುಗಳಂತಿದ್ದು ಇತರ ಪ್ರಾಣಿಗಳನ್ನು ಹಿಡಿಯುವುದಕ್ಕೆ ಸಹಾಯಕವಾಗಿವೆ. ಶಿರೋರದ ಮೂರನೆಯ, ನಾಲ್ಕನೆಯ, ಐದನೆಯ ಮತ್ತು ಆರನೆಯ ಜೊತೆಯ ಉಪಾಂಗಗಳು ನಡೆಯಲು ನೆರವಾಗುವ ಕಾಲುಗಳು, ಒಂದೊಂದರಲ್ಲೂ ಏಳು ಖಂಡಗಳೂ ತುದಿಯ ಖಂಡದಲ್ಲಿ ಎರಡೆರೆಡು ನಖಗಳೂ ಇವೆ.

	ಮೀಸೋಸೊಮದ ಪ್ರತಿ ಖಂಡದ ಮೇಲಿರುವ ಟರ್ಗಮ್ ಮತ್ತು ತಳಭಾಗದಲ್ಲಿರುವ ಸ್ಟರ್ನಮ್ ಫಲಕಗಳ ನಡುವೆ ತೆಳುವಾದ ಕೈಟಿನ್ ಪೊರೆ ಇದೆ. ಮೊದಲನೆಯ ಖಂಡದ ಸ್ಟರ್ನಮ್ ಫಲಕದ ಮಧ್ಯೆ ಐದು ಮೂಲೆಗಳುಳ್ಳ ಜೆನೈಟಲ್ ಫಲಕ ಉಂಟು. ಇದು ಹೆಣ್ಣಿನಲ್ಲಿ ಅಖಂಡವಾಗಿದೆ. ಗಂಡಿನಲ್ಲಿ ಉದ್ದುದ್ದಕ್ಕೆ ಎರಡಾಗಿ ಸೀಳಿದೆ. ಜನನೇಂದ್ರಿಯ ದ್ವಾರವಿರುವುದು ಈ ಫಲಕದಲ್ಲೇ. ಎರಡನೆಯ ಖಂಡದ ಸ್ಟರ್ನಮ್ ಫಲಕದ ಮೇಲೆ ಬಾಚಣಿಗೆಯ ಹಲ್ಲುಗಳಂತಿರುವ ಪೆಕ್ಟೀನ್ಸ್ ಎಂಬ ಎರಡು ರಚನೆಗಳಿವೆ. ಉಳಿದ ಐದು ಖಂಡಗಳಲ್ಲಿ ಉಪಾಂಗಗಳಿಲ್ಲ. ಮೂರು, ನಾಲ್ಕು, ಐದು ಮತ್ತು ಆರನೆಯ ಖಂಡಗಳ ಸ್ಟರ್ನಮ್ ಫಲಕಗಳಲ್ಲಿ ಕಿಂಡಿಗಳಂತಿರುವ ದ್ವಾರಗಳಿವೆ. ಇವು ಶ್ವಾಸಾಂಗಗಳ ಹೊರ ದ್ವಾರಗಳು. ಮೆಟಸೋಮದಲ್ಲಿ ಆರು ಖಂಡಗಳಿವೆ. ಪ್ರತಿ ಖಂಡದಲ್ಲೂ ಉದ್ದವಾದ ಕೈಟಿನ್ ಉಂಗುರುಗಳಿವೆ. ಆದರೆ ಈ ಭಾಗದಲ್ಲಿ ಉಪಾಂಗಗಳಿಲ್ಲ. ಈ ಭಾಗದ ಹಿಂತುದಿಯಲ್ಲಿ ಕೊಂಡಿಯಿದೆ.

ಒಳರಚನೆ : ದೇಹದ ಒಳಗೆ ಬಣ್ಣರಹಿತ ರಕ್ತ ತುಂಬಿದ ದೇಹಾಂತರಾವಕಾಶವೂ ಅದರಲ್ಲಿ ಜೀರ್ಣಾಂಗಗಳು, ಹೃದಯ, ಜನನೇಂದ್ರಿಯ ಮತ್ತು ಇತರ ಅಂಗಗಳೂ ಇವೆ. ಅನ್ನನಾಳ ಮತ್ತು ಕರುಳು ಕಿರಿದಾದ ನಾಳಗಳು, ಕರುಳಿಗೆ ಸೇರಿದಂತೆ ದೊಡ್ಡ ಕುಡಿಗಳಿವೆ. ಇವು ಉದರದಲ್ಲಿ ತುಂಬಿರುವ ಜೀರ್ಣಗ್ರಂಥಿಯೊಳಗೆ ಹುದುಗಿವೆ. ಚೇಳು ಇತರ ಜೀವಿಗಳ ದೇಹದಿಂದ ತನಗೆ ಬೇಕಾಗುವ ಆಹಾರವನ್ನು ಹೀರುವುದು. ಹೃದಯ ಉದ್ದಕೊಳವೆಯಂತಿದೆ. ಅಕ್ಕಪಕ್ಕದಲ್ಲಿ ಏಳು ಜೊತೆ ಆಸ್ಟಿಯೋಲ್ ದ್ವಾರಗಳಿವೆ. ದೊಡ್ಡ ಶುದ್ಧ ರಕ್ತನಾಳಗಳು ಮತ್ತು ಮಲಿನ ರಕ್ತನಾಳಗಳೂ ಉಂಟು. ಮಿಸೋಸೊಮದ, ಮೂರು, ನಾಲ್ಕು, ಐದು ಮತ್ತು ಆರನೆಯ ಖಂಡಗಳಲ್ಲಿ ನಾಲ್ಕು ಜೊತೆ ಶ್ವಾಸಕೋಶಗಳಿವೆ. ಕೊಂಡಿಯಲ್ಲಿ ಒಂದು ಜೊತೆ ದೊಡ್ಡ ವಿಷಗ್ರಂಥಿಗಳಿವೆ. ಇವುಗಳಿಂದ ಹೊರಡುವ ಸೂಕ್ಷ್ಮವಾದ ನಾಳಗಳು ಕೊಂಡಿಯ ಮುಳ್ಳಿನ ತುದಿಯಲ್ಲಿ ಹೊರತೆರೆಯುತ್ತವೆ.

	ಚೇಳು ನಿಶಾಚರಿ, ಹಗಲೆಲ್ಲ ಕಲ್ಲುಗಳ ಪೊಟರೆಗಳಲ್ಲೊ ತೊಗಟೆ, ಎಲೆ, ಕಸಕಡ್ಡಿ, ಮನೆಗಳ ಹೆಂಚುಗಳ ಬುಡದಲ್ಲೊ, ಅಡಗಿದ್ದು ಕತ್ತಲಾದ ಅನಂತರ ಆಹಾರವನ್ನು ಅರಸಿಕೊಂಡು ಹೊರಬರುತ್ತದೆ. ಸಣ್ಣಪುಟ್ಟ ಕೀಟಗಳು ಇದರ ಮುಖ್ಯ ಆಹಾರ. ಇದು ಆಹಾರವನ್ನು ಸೇವಿಸುವ ಕ್ರಮ ಬಲು ವಿಚಿತ್ರ. ಯಾವುದಾದರೂ ಕೀಟವೊಂದು ಸಿಕ್ಕರೆ ಅದನ್ನು ತನ್ನ ಪೆಡಿಪಾಲ್ಟಿಗಳಿಂದ ಬಿಗಿಯಾಗಿ ಹಿಡಿದು, ಕೊಂಡಿಯಿಂದ ಕುಟುಕಿ, ಕೆಲಿಸರಿಗಳ ಸಹಾಯದಿಂದ ಅರೆದು, ಆ ಪ್ರಾಣಿಯೊಳಕ್ಕೆ ತನ್ನ ಕಿಣ್ವಗಳನ್ನು ಸೇರಿಸುತ್ತದೆ. ಕಿಣ್ವಗಳ ಚಟುವಟಿಕೆಯಿಂದ ಆಹಾರ ಪ್ರಾಣಿಯ ಒಳ ಅಂಗಾಂಶಗಳೆಲ್ಲ ದ್ರವರೂಪಕ್ಕೆ ತಿರುಗುತ್ತದೆ ಆಗ ಅದಕ್ಕೆ ತನ್ನ ಬಾಯಿ ಹಚ್ಚಿ ಆಹಾರದ್ರವವನ್ನು ಹೀರಿಕೊಳ್ಳುತ್ತದೆ. ಚೇಳು ಆಹಾರವಿಲ್ಲದೆ ಬಹಳ ದಿನ, ಕೆಲವೊಮ್ಮೆ ವರ್ಷಕ್ಕೂ ಹೆಚ್ಚು ಕಾಲ ಬದುಕಿರಬಲ್ಲದು. ಹಾಗೆಯೇ ಅದಕ್ಕೆ ನೀರಿನ ಆವಶ್ಯಕತೆಯೂ ಬಹಳ ಕಡಿಮೆ.

	ಚೇಳು ಒಂಟಿ ಜೀವಿ. ಯಾವ ತೆರನ ಸಂಘಜೀವನವನ್ನೂ ಇದು ಪ್ರದರ್ಶಿಸುವುದಿಲ್ಲ. ಆದರೆ ಸಂತಾನೋತ್ಪತ್ತಿಯ ಕಾಲದಲ್ಲಿ ಗಂಡು ಹೆಣ್ಣುಗಳು ಜೊತೆಗೂಡಿ ಕೊಂಚಕಾಲ ಪ್ರಣಯಕೇಳಿಯಲ್ಲಿ ತೊಡಗಿದ್ದು ಅನಂತರ ಸಂಭೋಗ ನಡೆಸುತ್ತವೆ. ಆ ಕಾಲದಲ್ಲಿ ಗಂಡಹೆಣ್ಣುಗಳು ಕೈಗಳನ್ನು ಹಿಡಿದುಕೊಂಡು ನೃತ್ಯ ಮಾಡುವುದುಂಟು. ಸಂಭೋಗಕ್ರಿಯೆಯ ಅನಂತರ ಹೆಣ್ಣು ಗಂಡುಚೇಳನ್ನು ತಿಂದುಹಾಕಿಬಿಡುತ್ತದೆ. ಗರ್ಭಾಂಕುರಗೊಂಡ ಅಂಡಗಳು ತಾಯ ದೇಹದಲ್ಲೇ ಬೆಳೆದು ಮರಿಗಳಾಗಿ ತಾಯಿ ಗರ್ಭದಿಂದ ಹೊರಬರುತ್ತದೆ. ಹೊರಬಂದಾಗ ಬಹಳ ಅಸಹಾಯಕ ಸ್ಥಿತಿಯಲ್ಲಿರುವ ಇವು ಕೆಲವು ಕಾಲ ತಾಯ ಬೆನ್ನನ್ನು ಏರಿ ಸವಾರಿ ಮಾಡುತ್ತಿದ್ದು, ಕೊಂಚ ದೊಡ್ಡವಾದ ಮೇಲೆ ಸ್ವತಂತ್ರ ಜೀವನ ನಡೆಸತೊಡಗುತ್ತವೆ. ತಾಯಿಯ ಬೆನ್ನನ್ನು ಭೇದಿಸಿಕೊಂಡು ಮರಿಗಳು ಹೊರಬರುತ್ತವೆ ಎಂಬ ಭಾವನೆ ಜನಜನಿತವಾಗಿದ್ದರೂ ಇದು ವೈಜ್ಞಾನಿಕ ಸತ್ಯವಲ್ಲ. 
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ